ಸಿಂಧೂಕಣಿವೆಯ ನಾಗರಿಕತೆ

	ಸಿಂಧೂ ಕಣಿವೆಯ ನಾಗರಿಕತೆ ಪ್ರಪಂಚದಲ್ಲಿಯೇ ಅತ್ಯಂತ ಪುರಾತನವಾದ (ಕ್ರಿ.ಪೂ. 2,800-1800) ನಾಗರಿಕತೆಯಾಗಿದೆ. ಭಾರತ ಉಪಖಂಡದ ವಾಯವ್ಯ ಭಾಗದಲ್ಲಿ ಕಂಡುಬರುವ ಈ ನಾಗರಿಕತೆ ಸು. 2,200ರ ಹೊತ್ತಿಗೆ ಯುರೋಪ್ ಖಂಡಕ್ಕಿಂತ ಹೆಚ್ಚು ಪ್ರದೇಶವನ್ನು ಆಕ್ರಮಿಸಿತ್ತು. ಪುರಾತನ ಇತಿಹಾಸಕಾರರು ಈ ನಾಗರಿಕತೆಯನ್ನು ಸಿಂಧೂ-ಸರಸ್ವತಿ ನದಿ ನಾಗರಿಕತೆ ಎಂತಲೂ ಕರೆದಿದ್ದಾರೆ. 1870ರಲ್ಲಿ ರೈಲ್ವೆ ಕೆಲಸಗಾರರು ರೈಲು ಹಳಿಗಳನ್ನು ಹಾಕುವಾಗ ಅತ್ಯಂತ ಪುರಾತನವಾದ ಈ ನಾಗರಿಕತೆಯ ನಗರ ಹಾಗೂ ರಸ್ತೆ ನಿರ್ಮಾಣದ ಅವಶೇಷಗಳನ್ನು ಗುರುತಿಸಿದರು. ಕಟ್ಟಡ ಹಾಗೂ ರಸ್ತೆಗಳ ನಿರ್ಮಾಣಕ್ಕೆ ಬಳಸಲಾದ ಇಟ್ಟಿಗೆಗಳೂ ದೊರೆತವು. ಇಂಡಸ್ ಅಥವಾ ಸಿಂಧೂ ನದಿ ಏಷ್ಯ ಖಂಡದಲ್ಲೇ ಹೆಚ್ಚು ಉದ್ದದ ಹರಿವುಳ್ಳ (2,897 ಕಿಮೀ) ನದಿಯಾಗಿದ್ದು ಭಾರತಕ್ಕೆ ಇಂಡಿಯ ಎಂಬ ಹೆಸರು ಇದರಿಂದಲೇ ಬಂದಿತೆನ್ನುವರು. ಪುರಾತತ್ತ್ವಶಾಸ್ತ್ರಜ್ಞರು ನೂರಾರು ಪುರಾತನ ನಗರಗಳನ್ನೂ ಹಳ್ಳಿಗಳನ್ನೂ ಈ ಪ್ರದೇಶದಲ್ಲಿ ಗುರುತಿಸಿದ್ದಾರೆ. ಇಲ್ಲಿ ವಾಸವಾಗಿದ್ದವರು ಎಲ್ಲಿಂದ ಬಂದಿರಬಹುದೆಂಬುದರ ಬಗ್ಗೆ ಪುರಾವೆಗಳಿಲ್ಲ. ಈ ಪಟ್ಟಣಗಳಲ್ಲಿ ಮುಖ್ಯವಾದವು ಹರಪ್ಪ ಮತ್ತು ಮೊಹೆಂಜೊದಾರೊ. ಈ ಪಟ್ಟಣಗಳು 40,000 ಕ್ಕಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದವೆಂದು ಅಂದಾಜು ಮಾಡಲಾಗಿದೆ. ಹಿಂದೂಖುಷ್ ಹಾಗೂ ಹಿಮಾಲಯ ಪರ್ವತಗಳ ಮಧ್ಯೆ ಉಗಮಿಸುವ ನದಿಗಳು ಬೇಸಗೆಯಲ್ಲಿ ಕರಗುವ ಮಂಜಿನಿಂದಾಗಿ ತುಂಬಿ ಹರಿಯುತ್ತವೆ. ಈ ಜೀವಂತ ನದಿಯೇ ಸಿಂಧೂಕಣಿವೆಯ ನಾಗರಿಕತೆಗೆ ಪೋಷಕ ಸ್ಥಳವಾಯಿತು. ಫಲವತ್ತಾದ ಮೆಕ್ಕಲು ಮಣ್ಣನ್ನು ದಂಡೆಯ ಎರಡೂ ಕಡೆ ತಂದುಹಾಕುವುದರಿಂದ ಕೃಷಿ ಅತ್ಯಂತ ಮುಖ್ಯ ಚಟುವಟಿಕೆಯಾಯಿತು. ಕ್ರಿ.ಪೂ. 3000ದ ಹೊತ್ತಿಗೆ ಜನರು ನದಿ ದಂಡೆಯಲ್ಲಿ ಅನೇಕ ಕಾಲುವೆಗಳನ್ನು ನಿರ್ಮಿಸಿ ವ್ಯವಸಾಯ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಗೋದಿ, ಬಾರ್ಲಿ, ಬಟಾಣಿ, ಖರ್ಜೂರ, ಸಾಸುವೆ, ಖರಬೂಜ, ಬತ್ತ ಹಾಗೂ ಹಣ್ಣು-ತರಕಾರಿಗಳನ್ನು ಬೆಳೆಯುತ್ತಿದ್ದರು. ಇವರು ಪ್ರಪಂಚದಲ್ಲಿಯೇ ಮೊಟ್ಟಮೊದಲ ಬಾರಿಗೆ ಹತ್ತಿಯನ್ನು ಬೆಳೆದು ಉಡುಪನ್ನು ತಯಾರಿಸಿದ್ದರು. ಇವರ ಉಡುಪು, ಕೇಶವಿನ್ಯಾಸ ಸುಮೇರಿಯನ್ ಜನರ ಉಡುಪುವಿನ್ಯಾಸಗಳಿಗೆ ಹೋಲು ವಂತಿತ್ತು. ಉನ್ನತ ಮಟ್ಟದ ಇವರ ನಾಗರಿಕತೆಯಲ್ಲಿ ವ್ಯವಸ್ಥಿತ ಆಡಳಿತವಿತ್ತು. ತಾಮ್ರ, ಹಿತ್ತಾಳೆ, ಸೀಸ-ಮುಂತಾದ ಲೋಹಗಳ ಬಳಕೆಯಿತ್ತು. ಸಾಕುಪ್ರಾಣಿಗಳಲ್ಲಿ ಒಂಟೆ, ಎಮ್ಮೆ, ಕುರಿ, ಕೋಳಿ, ನಾಯಿ, ಹಂದಿ ಹಾಗೂ ಕುದುರೆಗಳು ಮುಖ್ಯವಾಗಿದ್ದವು. ಮೊಹೆಂಜೊದಾರೊ ನಗರದ ಸಾಮೂಹಿಕ ಸ್ನಾನಗೃಹಗಳು ಅವರ ನಾಗರಿಕತೆಯ ಮಟ್ಟವನ್ನು ತಿಳಿಸುತ್ತವೆ. ಧಾನ್ಯಗಳನ್ನು ತುಂಬಲು ಬೃಹದಾಕಾರದ ಕಣಜಗಳು, ನೀರನ್ನು ಶೇಖರಿಸಲು ತೊಟ್ಟಿಗಳು ಕಂಡುಬಂದಿವೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ರಚಿಸಲಾದ ಕಾವಲುಗೋಪುರ ನಗರ ಮಧ್ಯದಲ್ಲಿ ನಿರ್ಮಿತವಾಗಿತ್ತು. ಪಟ್ಟಣಗಳನ್ನು ಲಂಬಕೋನದಲ್ಲಿ ರಚಿಸಲಾಗಿತ್ತು. ಮನೆಗಳ ರಚನೆ ಶಬ್ದ, ವಾಸನೆ ಹಾಗೂ ಕಳ್ಳಕಾಕರಿಂದ ರಕ್ಷಿಸುವಂತಿದ್ದುವು. ಇಲ್ಲಿ ಸು. 2,000 ಮುದ್ರೆಗಳು ದೊರೆತಿವೆ. ಇವರು ಭಾರತ, ಪರ್ಷಿಯ ಮತ್ತು ಸುಮೇರ್ ದೇಶಗಳೊಡನೆ ವ್ಯಾಪಾರ-ವಹಿವಾಟುಗಳನ್ನಿಟ್ಟುಕೊಂಡಿದ್ದರು. ಇವರು ಪ್ರಾಣಿ ಹಾಗೂ ಮನುಷ್ಯರ ಪ್ರತಿಕೃತಿಗಳನ್ನು ಪೂಜಿಸುತ್ತಿದ್ದರು. ಟೆರಕೋಟದಿಂದ ನಿರ್ಮಿಸಲಾದ ಮಾತೃದೇವತೆಯ ವಿಗ್ರಹಗಳು ಎಲ್ಲರ ಮನೆಗಳಲ್ಲಿಯೂ ಕಂಡುಬರುತ್ತಿದ್ದವು. ಕೆಲವು ಮುದ್ರೆಗಳಲ್ಲಿ ಕಂಡುಬಂದ ಪ್ರಾಣಿಯ ಕೊಂಬು ಹಾಗೂ ಸುತ್ತಲೂ ಇರುವ ಕಾಡುಪ್ರಾಣಿಗಳ ಚಿತ್ರಗಳು ಹಿಂದು ದೇವರುಗಳಾದ ಶಿವ-ಪಾರ್ವತಿಯವರ ಸಂಕೇತಗಳಾಗಿರಬಹುದೆಂದು ಊಹಿಸಲಾಗಿದೆ. ಇವು ಹಿಂದುಧರ್ಮದ ಮೊಟ್ಟಮೊದಲನೆಯ ಧಾರ್ಮಿಕ ಆಚರಣೆಗಳಾಗಿರಬಹುದು. ಇವರ ಬರೆಹಗಳ ಬಗ್ಗೆ ಮಾಹಿತಿಗಳಿಲ್ಲ. ಮುಂದೆ ಇಲ್ಲಿಯ ಜನರು ಏಕೆ ಈ ಪ್ರದೇಶವನ್ನು ಬಿಟ್ಟು ತೆರಳಿದರೆಂಬ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಪ್ರಾಯಃ ನೈಸರ್ಗಿಕ ಕಾರಣಗಳಾದ ಪ್ರವಾಹ, ಕ್ಷಾಮ, ಭೂಮಿಯ ಫಲವತ್ತತೆ ಕ್ಷೀಣಿಸುವಿಕೆ ಮುಖ್ಯ ಕಾರಣಗಳಾಗಿರಬಹುದು. ಅನಂತರ ವಾಯವ್ಯ ಗುಡ್ಡಗಾಡಿನ ಜನರು ಈ ಪ್ರದೇಶವನ್ನು ಆಕ್ರಮಿಸಿಕೊಂಡಿರಬಹುದು. ಮಧ್ಯ ಏಷ್ಯದಿಂದ ಆರ್ಯರು ಹಿಂದೂ ಖುಷ್ ಪರ್ವತ ಮಾರ್ಗವಾಗಿ ಬಂದು ಇಲ್ಲಿ ನೆಲೆಸಿದರೆನ್ನುವರು. ಕ್ರಿ.ಪೂ. 1,500ರ ಹೊತ್ತಿಗೆ ಈ ನಾಗರಿಕತೆ ವಿನಾಶದ ಹಾದಿ ಹಿಡಿದರೂ ಈ ನಾಗರಿಕತೆಯ ಲಕ್ಷಣಗಳು ತರುವಾಯ ಮುಂದುವರಿದವು.
(ಕೆ.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ